ಅಮ್ಮ ಯಾವತ್ತೂ ಬದಲಿಗೆ ತರಲಾಗದ ಪದ, ಭಾವ, ಸಂಗ. ಅಮ್ಮನ ಬಗ್ಗೆ ಬರೆದರೆ ಎಲ್ಲರಿಗೂ ಅವರಮ್ಮ, ಅಮ್ಮನ ಥರ ಕಂಡ ಒಂದಿಷ್ಟು ಸಂಬಂಧಗಳು, ಅಮ್ಮನಂತೆ ಕಾಯ್ದ ಗೆಳೆಯ/ಗೆಳತಿ ನೆನಪಾಗುತ್ತಾರೆ. ಈ ಈ `ಕಳ್ಳಕುಳ್ಳ'ರ ಬ್ಲಾಗಂಗಡಿಯಲ್ಲಿ ಇತ್ತೀಚಿಗೆ ಅಮ್ಮ ಅಮ್ಮ ಎಂಬ ಕಳ್ಳು ಸಂಬಂಧದ ಬಗ್ಗೆ ಬರೆದ ಕವಿತೆಗೆ ಬಂದ ಪ್ರತಿಕ್ರಿಯೆ ಅಭೂತಪೂರ್ವ. ಅನೇಕರು ಕಣ್ಣೀರಿಟ್ಟ ಪ್ರಸಂಗವನ್ನೂ ವಿವರಿಸಿದ್ದಾರೆ. ಪ್ರತಿಕ್ರಿತಿಸಿ, ಅಮ್ಮನ ಕವಿತೆಗೆ ಕೃತಜ್ಞರಾಗಿದ್ದಾರೆ.
ಧನ್ಯವಾದಗಳು.
ಇದೀಗ ಅಮ್ಮನ ಬದುಕು, ಬವಣೆಗಳ ಹಿನ್ನೆಲೆಯಲ್ಲಿ ಸಾಗುವ ಒಂದು ಕತೆಯನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. `ಉದಯವಾಣಿ'ಯಲ್ಲೇ ಪ್ರಕಟಣೆ ಕಂಡ ಈ ಕತೆ ಹಿಂದೊಮ್ಮೆ `ಪಿಚ್ಚರ್' ಬ್ಲಾಗ್‌ನಲ್ಲೂ ಪ್ರಕಟವಾಗಿತ್ತು. ಇದೀಗ `ಕಳ್ಳಕುಳ್ಳ' ಬ್ಲಾಗ್‌ನಲ್ಲಿ ಆ ಕತೆಯ ಮರು ಪ್ರಸಾರ.
ಓದಿ, ಪ್ರತಿಕ್ರಿಯಿಸಿ. ಅಂದಹಾಗೆ ಕತೆಯ ಹೆಸರು: ಕೆಂಪು ರಕ್ತ ಕಣಗಳು.
ಕೆಂಪು ರಕ್ತ ಕಣಗಳು
ನನಗೆ ಅಪ್ಪನನ್ನು ನೋಡಿದ್ದು ನೆನಪಿಲ್ಲ. ಆದರೆ ಬುದ್ಧಿ ತಿಳಿದಾಗಿನಿಂದ ಅವನ ವಿಷಯ ಅಸ್ಪಷ್ಟವಾಗಿ, ಮುಜುಗರ ಹುಟ್ಟಿಸುವ ಅಸ್ತ್ರವಾಗಿ ಪ್ರಸ್ತಾಪವಾಗಿದೆ. ಆಶ್ಚರ್ಯ ಎನ್ನಬೇಕೋ, ದುರಾದೃಷ್ಟ ಎನ್ನಬೇಕೋ, ನನಗೆ ಅಪ್ಪನ ನೆನಪು ಆಗುತ್ತಲೇ ಇಲ್ಲ. ನೆನಪಾಗುವುದಕ್ಕೆ ಏನಾದರೂ ಘಟನೆಗಳು ನಮ್ಮ ನಡುವೆ ನಡೆದಿರಬೇಕಲ್ಲಾ. ನನಗೆ ತಿಳಿದ ಹಾಗೆ ಅಂಥದ್ದೊಂದೂ ನಡೆಯಲಿಲ್ಲ. ಒಂದು ಸಾರಿ ಅವನ ಮಸುಕು ಮಸುಕಾದ ಮುಖಭಾವ ನನಗೆ ಕಂಡಿತ್ತು. ಅದು ಮನೆಯ ಬೀರುವಿನಲ್ಲಿ. ಆ ಬೀರುವನ್ನು ಒಂದು ದಿನ ಸ್ವಚ್ಛ ಮಾಡುವ ತರಾತುರಿಯಲ್ಲಿ ನಾನಿದ್ದೆ. ಆಗ ಒಂದು ಫೋಟೋ ಕಂಡಿತು. ಗಟ್ಟಿಮುಟ್ಟಾದ ಚೌಕಟ್ಟಿನೊಳಗಿದ್ದ ಫೋಟೋ ಅದು. ಸಾಕಷ್ಟು ದೊಡ್ಡದಾಗಿತ್ತು. ಮಗುಚಿ ಇಡಲಾಗಿತ್ತು. ನಾನು ಪ್ರಯಾಸಪಟ್ಟು ಅದನ್ನು ಮೇಲೆತ್ತಿ, ನನ್ನತ್ತ ತಿರುಗಿಸಿಕೊಂಡೆ. ಅದರಲ್ಲಿ ಅತ್ಯಂತ ಚೆನ್ನಾಗಿ ಕಂಡವಳು ನನ್ನ ಅಮ್ಮ. ಕಿವಿಯಲ್ಲಿ ಅವಳ ಮದುವೆ ಕಾಲಕ್ಕೆ ಫ್ಯಾಷನ್ ಆಗಿರಬಹುದಾದ ಲೋಲಾಕು, ಮೂಗಿನಲ್ಲಿ ನತ್ತು, ಕೊರಳಲ್ಲಿ ಎರಡೆಳೆ ಕರಿಮಣಿ. ಬಲ ಭಾಗದಲ್ಲಿ ಬೈತಲೆ ತೆಗೆದ ಅಮ್ಮ ಲಕ್ಷಣವಾಗಿ ಕಾಣುತ್ತಿದ್ದಳು. ಪಕ್ಕದಲ್ಲಿ ಅಪ್ಪ. ಆ ಜಾಗ ನೀರು ಸೋರಿ ಹೋಗಿದ್ದರಿಂದ ಸರಿಯಾಗಿ ಗ್ರಹಿಸಲು ಆಗುತ್ತಿರಲಿಲ್ಲ. ಚಿತ್ರದಲ್ಲಿ ಅಪ್ಪ ಸ್ಫುರದ್ರೂಪಿಯಾಗಿ ಇದ್ದನಾದರೂ ಅವನ ಮೇಲೆ ಸಿಟ್ಟಿದ್ದರಿಂದ ಸಿನಿಮಾಗಳಲ್ಲಿ ಬರುವ ಚೆಂದ ಮುಖದ ಕ್ರೂರ ಕೇಡಿಯ ಹಾಗೆ ಕಂಡು ಥಟ್ಟನೆ ಮುಚ್ಚಿಟ್ಟೆ. ಆಮೇಲೆ ಬೀರು ಸ್ವಚ್ಛ ಮಾಡಲು ಹೋಗಲಿಲ್ಲ.
ಅಮ್ಮನನ್ನು ನಾನು ನೋಡಿದ್ದು ಬಹುಪಾಲು ಕೆಲಸ ಮಾಡುವಾಗ. ಅವಳಿಗೆ ಕೆಲಸ ಬಿಟ್ಟರೆ ಬೇರೇನೂ ಕಾಣುವುದಿಲ್ಲವೇ ಎಂದು ನಾನು ಯೋಚಿಸಿದ ಹಗಲು ಇರುಳುಗಳು ಬಹಳ. ಆಗೆಲ್ಲಾ ಅವಳ ಮೇಲೆ ಕನಿಕರ, ಪ್ರೀತಿ ಬರುವುದು. ರಾತ್ರಿ ಮಂಚದ ಮೇಲೆ ಕುಳಿತು ಇಳಿಬಿಟ್ಟ ಕಾಲನ್ನು ನೀವುತ್ತಾ, ಒಡೆದ ಹಿಮ್ಮಡಿಗೆ ವ್ಯಾಸಲಿನ್ ಹಚ್ಚುವುದನ್ನು ನಾನು ಕೆಳಗಿನ ಹಾಸಿಗೆಯಲ್ಲಿ ಮಲಗಿಕೊಂಡು ಎವೆಯಿಕ್ಕದೆ ನೋಡುತ್ತಿದ್ದೆ. ಹಾಗೆ ನೋಡುತ್ತಿರುವುದು ಅರಿವಾದ ಕೂಡಲೇ ಅವಳು ಏನೋ ಮಾತಾಡಿ ಬೆಡ್‌ಶೀಟ್ ಎಳೆದುಕೊಂಡು ಮಲಗಿಬಿಡುತ್ತಿದ್ದಳು. ಸೀಮೆಎಣ್ಣೆ ಬುಡ್ಡಿ ಆರಿದ ಮೇಲೂ ಅಮ್ಮನ ಬಳೆಯ ಸದ್ದು, ವಿಪರೀತ ಕೆಲಸದಿಂದುಂಟಾದ ಸೊಂಟ ನೋವಿಗೆ ಹೊಂದಿಕೊಳ್ಳಲಾಗದೇ ಆಗಾಗ ಅವಳು ಹೊರಳುವ ಸದ್ದು, ಮಂಚದ ದಡ್ ದಡ್ ಸದ್ದು, ನರಳಿಕೆ, ಬುಸ್ಸಂತ ಉಸಿರು ನನಗೆ ನಿದ್ದೆ ಬರುವವರೆಗೆ ಕೇಳಿಸುತ್ತಿತ್ತು.